ಬುದ್ಧಿ ಮಾತು…

ಒಬ್ಬ ಅದ್ಭುತ ಮಾತುಗಾರನ ಅದ್ಭುತವಾದ ಮಾತುಗಳನ್ನು ಕೇಳ್ತಿದ್ದೆ. ಆತ ಹೇಳ್ತಾನೆ ”ನಮ್ಮೊಳಗೊಬ್ಬ ಸಲಹೆಗಾರ, ನಮ್ಮ ಹಿತೈಷಿ ಇರ್ತಾನೆ. ಆತ ಯಾವಾಗ್ಲೂ ನೋಡು, ಇದು ಕೆಟ್ಟದು ಹೀಗ್ ಮಾಡ್ಬೇಡ, ಅಂತ ನಾವು ತಪ್ಪು ದಾರಿ ತುಳಿಯುವಾಗ ಎಚ್ಚರಿಸ್ತಾ ಇರ್ತಾನೆ. ಆದ್ರೆ ನಾವೇನ್ ಮಾಡ್ತೇವೆ ಅಂದ್ರೆ ಅವ್ನ ತಲೆ ಮೇಲ್ ಪಟ್ ಅಂತ ಹೊಡ್ದು ಸುಮ್ನಿರು, ಪಕ್ಕದವ್ನ್ ಮಾಡ್ತಾನೆ, ನನ್ ಫ್ರೆಂಡ್ ಮಾಡ್ತಾನೆ ನಾನ್ಯಾಕೆ ಹೀಗ್ ಮಾಡ್ಬಾರ್ದು? ಅಂತ ಅವ್ನ ಮಾತನ್ನು ಕಡೆಗಣಿಸಿ ಮೂಲೆಗ್ ತಳ್ತೇವೆ. ಅವ್ನು ಒಂದು ನಾಲ್ಕೈದು ಬಾರಿ ಆ ರೀತಿ ಹೇಳ್ತಾನೆ. ಪ್ರತಿ ಬಾರಿಯೂ ಅವ್ನ್ ತಲೆ ಮೇಲ್ ಹೊಡ್ದು ಸುಮ್ನೆ ಕೂತ್ಕೊಳಿಸ್ತೇವೆ. ಆಮೇಲೆ ಅವ್ನು ನಮ್ ಜೊತೆ ಮಾತಡೋದೇ ಬಿಟ್‌ಬಿಡ್ತಾನೆ. ಅವ್ನೇ ಆತ್ಮ. ಆತ ಪೂರ್ತಿಯಾಗಿ ಸತ್ತೋಗ್ತಾನೆ. ಆಮೇಲೆ ನಮ್ಮನ್ನು ಹೇಳೋರ್ ಕೇಳೋರ್ ಇರೋದೇ ಇಲ್ಲ. ಬೇಕಾ ಬಿಟ್ಟಿ ಮನಸ್ಸು ಎಲ್ಲೆಲ್ಲೋ ಹರಿ ಬಿಡ್ತೇವೆ. ಮುಟ್ಬೇಕಾದ ಗುರಿಯನ್ನ ಮುಟ್ಟೋದಕ್ಕೆ ಸಾಧ್ಯಾನೇ ಆಗೋದಿಲ್ಲ. ಗೆಳೆಯರೇ ಆತ್ಮ ಶಕ್ತಿಯನ್ನ ಕಳಕೊಂಡ ಮನುಷ್ಯ ಬದುಕಿದ್ದು ಸತ್ ಹಾಗೆ. ” ಅಂತ.

ನಿಜ, ಯಾವಾಗ್ಲು ಅಂದ್ಕೊಳ್ಳೋದು ನಾನು, ಇಲ್ಲ ಇವತ್ತಿನಿಂದ ಮೊಬೈಲ್ ಕಡಿಮೆ ಯೂಸ್ ಮಾಡ್ತೇನೆ. ಅದ್ರಿಂದ ದೂರ ಇರ್ತೇನೆ ಅಂತ. ಆದ್ರದು ಸಾಧ್ಯವೇ ಅಗೋದಿಲ್ಲ. ಯಾಕಂದ್ರೆ ಅದಾಗ್ಲೆ ಅವ್ನ ತಲೆ ಮೇಲ್ ಹೊಡ್ದು ಸುಮ್ನೆ ಕೂತ್ಕೊಳ್ಸಿದೇನೆ. ಪರಿಣಾಮ ಮೊಬೈಲ್‍ಗೆ ಸಂಪೂರ್ಣ ಶರಣಾಗಿದೇನೆ. ದುರಂತ, ನನಗಿವತ್ತು ಮಾಡ್ಲಿಕೆ ಕೆಲಸ ಇಲ್ಲ, ಆದ್ರೂ ಸಮಯ ಇಲ್ಲ. ಎಲ್ಲೋಯ್ತು, ಭೂಮಿ ಅಷ್ಟು ನಿಧಾನವಾಗಿ ತಿರುಗಿ ನಮಗಾಗಿ ನೀಡಿದ ಆ ಇಪ್ಪತ್ತನಾಲ್ಕು ಗಂಟೆಗಳು? ಎಲ್ಲವನ್ನು ಈ ಮೊಬೈಲ್ ಅನ್ನೋ ಮಹಾನ್ ಸೃಷ್ಟಿ ನುಂಗಿ ನೀರ್ ಕುಡಿದು ಬಿಟ್ಟಿದೆ. ಕಣ್ಣುತುಂಬ ನಿದ್ದೆ ಇಲ್ಲ, ಮನ ಬಿಚ್ಚಿ ಮಾತಿಲ್ಲ, ನನ್ನ ಸುತ್ತಲಿನ ಸುಂದರವನ್ನು ಪಂಚ ಇಂದ್ರಿಯಗಳ ಮೂಲಕ ಅನುಭವಿಸಲು ಸಾಧ್ಯವಿಲ್ಲ, ಪುಸ್ತಕಗಳು, ಲೇಖನಿಗಳು ಕೇವಲ ಅಸ್ತಿಪಂಜರಗಳಾಗಿ ಅಲ್ಲೆಲ್ಲೋ ಬಿದ್ದಿವೆ. ಇಲ್ಲ, ಆ ನನ್ನ ಆತ್ಮಕ್ಕಿಂತಲೂ ಜಾಸ್ತಿ ಮೊಬೈಲ್ ನನ್ನನ್ನ ಆವರಿಸಿ ಬಿಟ್ಟಿದೆ, ಅದೆಷ್ಟರ ಮಟ್ಟಿಗೆ ಅಂತಂದ್ರೆ ಮೊಬೈಲ್ ಅನ್ನುವವ ರಾಕ್ಷಸ, ಅಂತ ಹೇಳಿದ್ರೆ ನನ್ನ ಮನಸ್ಸು ಸುತಾರಾಂ ಒಪ್ಪುವುದಿಲ್ಲ, ಬದಲಾಗಿ ನನ್ನೆಡೆಗೆ ತಿರುಗಿ ಮುಖ ಕೆಂಪು ಮಾಡಿಕೊಂಡು ‘ಗುರ್’ ಅಂತ ಹೇಳ್ತದೆ. ಯಾಕ್ ಹೀಗೆ? ತಪ್ಪು ಮೊಬೈಲ್‍ನದ್ದಲ್ಲ. ನನ್ನದೇ. ಅವ್ನಿಗೆ ಹೊಡೆದು ಕೂತ್ಕೊಳಿಸಿದೇನಲ್ಲ….!

ನಾನಿನ್ನೂ ಸರಳವಾಗಿ ಹೇಳಬಲ್ಲೆ. ಮೊದಲೆಲ್ಲ ನಾನು ಶಾಲೆಯಿಂದಲೋ ಕಾಲೇಜಿನಿಂದಲೋ ಮನೆಗೆ ಹೋಗುವಾಗ ನನ್ನ ಆ ಪಶ್ಚಿಮ ಘಟ್ಟದ ಆ ಹಸುರನ್ನು ಸವಿಯಬಲ್ಲವಳಾಗಿದ್ದೆ. ಅದು ಮನಸ್ಸಿಗೆ ಹುಮ್ಮಸ್ಸನ್ನು ತುಂಬುತ್ತಿತ್ತು. ಆದ್ರೆ ಈಗ ಹಾಗಲ್ಲ. ಆ ಹಸುರನ್ನು ಮೊಬೈಲ್‍ನೊಳಗೆ ತುಂಬಿಸುವ ತವಕ. ನೇರವಾಗಿ ಕಣ್ಣಿನ ಮೂಲಕ ನಾನಿವತ್ತು ಯಾವುದನ್ನೂ ನೋಡ್ತಾ ಇಲ್ಲ. ಎಲ್ಲವನ್ನು ಮೊಬೈಲ್ ಕೆಮರಾದ ಮೂಲಕ. ಹೇಗೆ ಹೆತ್ತವರು ತಮ್ಮ ಮಕ್ಕಳಿಗಾಗಿ ಎಲ್ಲವನ್ನೂ ಮಾಡ್ತಾರೋ ಅದೇ ರೀತಿ ನಾನು ಮೊಬೈಲ್‍ಗಾಗಿ. ನಾನು ಒಂದಷ್ಟು ಸಿಹಿ ತಿಂಡಿಗಳನ್ನು ಮಾಡ್ತೇನೆ, ಬಹುಷಃ ತಿನ್ಲಿಕನ್ನುವುದಕ್ಕಿಂತ ಜಾಸ್ತಿ ವಾಟ್ಸಪ್, ಫೇಸ್ ಬುಕ್‍ಗಳಲ್ಲಿ ಹಂಚಿಕೊಳ್ಳುವುದಕ್ಕಾಗಿ. ನಾನೊಂದಷ್ಟು ಜಾಗಗಳಿಗೆ ಹೋಗ್ತೇನೆ, ಬಹುಷಃ ಅನುಭವಕ್ಕಾಗಿ ಅನ್ನುವುದಕ್ಕಿಂತ ಜಾಸ್ತಿ ಸ್ಟೇಟಸ್ ಅಪ್‍ಡೇಟ್ ಮಾಡುವುದೇ ನನಗೆ ಮುಖ್ಯ ಆಗಿರ್ತದೆ. ನಾನೊಂದಷ್ಟು ಛಾಯಾಚಿತ್ರಗಳನ್ನು ಅಲ್ಲಿ ತೆಗೆದುಕೊಳ್ತೇನೆ ಬಹುಷಃ ನೆನಪಿಗಾಗಿ ಅನ್ನುವುದಕ್ಕಿಂತ ಜಾಸ್ತಿ ನನ್ನ ಪ್ರೊಫೈಲ್ ಪಿಕ್‍ಗಳನ್ನ ಬದಲಾಯಿಸಿಕೊಳ್ಳುವುದಕ್ಕಾಗಿ. ನಾನು ನನ್ನ ಗೆಳೆಯರನ್ನೋ ಸಂಬಂಧಿಗಳನ್ನೋ ಭೇಟಿ ಆಗ್ತೇನೆ. ಅವರ ಜೊತೆ ನಗ್ತೇನೆ, ಸಂತೋಷ ಪಡ್ತೇನೆ ಬಹುಷಃ ಮನೋಲ್ಲಾಸಕ್ಕಿಂತಲೂ ಜಾಸ್ತಿ ಇಲ್ಲಿ ಇಂಟೆನ್ಷನ್ ಏನಿರ್ತದೆ ಅಂತಂದ್ರೆ,” ದುರ್ಗಾಕಾವೇರಿ ಹೊಸಮನೆ ಫೀಲಿಂಗ್ ಹ್ಯಾಪಿ ವಿಥ್………….., ……………, ಆಂಡ್ ಫೈವ್ ಅದರ್ಸ್” ಅನ್ನೋದನ್ನ ಕಪ್ಪಾದ ದಪ್ಪ ಅಕ್ಷರಗಳ ಮೂಲಕ ಜಗತ್ತಿಗೆ ಸಾರುವುದಕ್ಕಾಗಿ. ನಾನು ಖುಷಿಯಾಗಿದ್ದೇನೆ ಅಂತ ಇಡೀ ಪ್ರಪಂಚ ತಿಳ್ಕೊಳ್ಳಿ ಅನ್ನುವಂಥ ಅದ್ಯಾವುದೋ ಒಂದು ರೀತಿಯ ಭಾವನೆ. ಏನಾಗಿದೆ ಅಂದ್ರೆ ನನ್ನ ಬಗ್ಗೆ ನಾನು ಜಾಹಿರಾತು ಹಾಕಿಕೊಳ್ಳುವುದು. ಇದರಿಂದ ಲಾಭ ಏನು ಅಂತಂದ್ರೆ ನಿಜ ನಂಗೊತ್ತಿಲ್ಲ, ಒಂದಷ್ಟು, ವಾವ್, ಲೈಕ್, ಹಾರ್ಟ್‍ಗಳು, ಮತ್ತೊಂದಷ್ಟು ಕಮೆಂಟ್‍ಗಳು ಸಿಗುತ್ತವಲ್ಲಾ ಅನ್ನೋ ಬಿಕ್‍ನಾಸಿ ಆಸೆಗಳು, ಕೆಲವೊಂದ್ಸಲ ಕೆಲವೊಬ್ರಿಗೆ ಹೊಟ್ಟೆ ಉರಿಲಿ ಅಂತಲೇ ಆಗಿರ್ತದೆ, ಅಷ್ಟು ಮಾತ್ರ ಸತ್ಯ!

ಯಾಕೆ ಮೊಬೈಲ್ ಹಿಡಿದುಕೊಂಡ್ರೆ ಭೂಮಿ ಬಹಳ ವೇಗವಾಗಿ ತಿರುಗಿದಂತೆ ಭಾಸ ಆಗ್ತದೆ ಅಂದ್ರೆ, ನಮ್ಮವರೆಲ್ಲ ಅದ್ರೊಳಗಡೆಯೇ ಇರ್ತಾರೆ. ಕಲ್ಮಡ್ಕ ಗೂಡಂಗಡಿಯ ಚೋಮಣ್ಣನಿಂದ ಹಿಡಿದು, ಹೋಟೆಲ್ ಲಕ್ಷ್ಮಣಾಚಾರಿ ಅವರಲ್ಲಿಗೆ ಚಾ ಕುಡಿಲಿಕೆ ಬರುವ, ಇರುವ ಸಮಯವನ್ನೆಲ್ಲಾ ಅಲ್ಲೇ ಕಳೆಯುವ ನಾಲ್ಕೈದು ಮಂದಿ, ಊರ ಮಾನಮರ್ಯಾದೆಯ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳುವವರನ್ನೂ ಒಳಗೊಂಡಂತೆ(?) ಕಲ್ಮಡ್ಕ ಶಾಲೆ ಕಮಲ ಟೀಚರ್ ಇರ್ಬೋದು, ನಮ್ಮೊಟ್ಟಿಗೇ ಕಲಿತ ಲಲಿತ, ಕಾವ್ಯ, ಯತೀಶ, ಅಭಿಲಾಶ, ಅಖಿಲೇಶರು. ಮೇಲಿನ ಮನೆ ಗಣೇಶಣ್ಣ, ನಡುಮನೆ ಸೀತಾರಮ ಮಾವ, ಮೂಲೆ ಮನೆ ಚಂದ್ರ ದೊಡ್ಡಪ್ಪ, ಅವರ ಪತ್ನಿ-ಮಕ್ಕಳು, ಅವರಲ್ಲಿಗೆ ಕೆಲಸ ಮಾಡಲು ಬರುವ ಆಳುಗಳು, ಅಮ್ಮನ ಅಣ್ಣ ತಮ್ಮ, ತಂಗಿ-ಅಕ್ಕ, ಅವರ ಮಕ್ಕಳು, ಮೊಮ್ಮಕ್ಕಳು, ಬಸ್‍ನಲ್ಲಿ ಸಿಕ್ಕಿದವರು, ಕಂಡೆಕ್ಟರ್, ಡ್ರೈವರ್‍ಗಳು, ಡಾಕ್ಟರ್, ನರ್ಸ್‍ಗಳು, ಕಾರ್ಯಕ್ರಮಗಳಲ್ಲಿ ಸಿಕ್ಕವರು, ಎಂ.ಸಿ, ಸ್ವಾಗತ, ಧನ್ಯವಾದ ಮಾಡಿದವರು, ಅಧ್ಯಕ್ಷರು, ಸರ್ವ ಸದಸ್ಯರು, ಕಾರ್ಯದರ್ಶಿಗಳು, ಖಜಾಂಜಿಗಳು, ಅರ್ಚಕರು, ಪುರೋಹಿತರು, ಮೊಕ್ತೇಸರರು, ಭೂತ ಕಟ್ಟಿದವರು, ಬಣ್ಣದ ವೇಷದವರು, ಭಾಗವತರು, ಮೇಕಪ್‍‌ನವರು, ಹಾಲಿನವರು, ಕರೆನ್ಸಿ ಅಂಗಡಿಯವರು, ಸಾರಿ ಕೇಳಿದವರು, ಥ್ಯಾಂಕ್ಸ್ ಹೇಳಿದವರು, ಸೆಲೆಬ್ರೆಟಿಗಳು, ಗುರ್ತ ಇರುವವರು ಇಲ್ಲದೇ ಇರುವವರು. ಅಬ್ಬಬ್ಬಬ್ಬಾ! ಮೊಬೈಲ್ ಸಾಮನ್ಯವೇನ್ರೀ? ನಾವೆಲ್ಲೇ ಇದ್ರೂ ಎಲ್ಲರೂ ನಮ್ಮೊಟ್ಟಿಗೇ ಇರ್ತಾರೆ. ಸಾಧಾರಣ ಒಂದು ಒತ್ತೆಕೋಲಕ್ಕೋ ಜಾತ್ರೆಗೋ ಆಗುವಷ್ಟು ಜನ……! ಇವರೆಲ್ರಿಗೂ ಒಂದು ಹಾಯ್, ಗುಡ್ ಮಾರ್ನಿಂಗ್ ಅಥವಾ ಅವರಲ್ಲಿ ಒಂದು ಇಪ್ಪತ್ತು ಪರ್ಸೆಂಟ್ ಜನ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಸಾಕು… ಒಂದು ದಿನ ಆರಾಮದಲ್ಲಿ ತಪ್ಪಿಸಿಕೊಳ್ತದೆ. ಅದು ಸಾಲದ್ದಕ್ಕೆ ಸಿಕ್ಕ ಸಿಕ್ಕವರನ್ನೆಲ್ಲಾ ನೇಲಿಸುವ ಕೆಲಸ…. ”ಟ್ಯಾಗ್ ದ್ಯಾಟ್ ಫ್ರೆಂಡ್ ವಿತ್ ಹೂಮ್ ಯು ಬಂಕ್ ದ ಕ್ಲಾಸ್”, ಮೆನ್ಷನ್ ದ್ಯಾಟ್ ಫ಼್ರೆಂಡ್ ಆಫ಼್ ಯುವರ್ ಗ್ರೂಪ್ ಹೂ ಕಾನ್ ಹ್ಯಾಂಡಲ್ ಮೆನಿ ಗರ್ಲ್ ಫ್ರೆಂಡ್ ಅಟ್ ದ ಸೇಮ್ ಟೈಮ್” ಹೀಗೆ. ಈ ಕೆಲಸ ಅಂತೂ ಭಯಂಕರ. ”ಕಿಚ್ಚಸುದೀಪ್‍ರವರ ಅಪ್ಪಟ ಅಭಿಮಾನಿಯನ್ನ ಟ್ಯಾಗ್ ಮಾಡಿ” ಒಂದೋ ನೀವು ನೇಲಿಸ್ತೀರಿ ಅಥವಾ ನಿಮ್ಮನ್ನ ನೇಲಿಸ್ತಾರೆ. ಮತ್ತೆ ಅದಕ್ಕೆ ರಿಯಾಕ್ಷನ್, ಕಾಮೆಂಟ್‍ಗಳು ದೇವಾ…! ವಾಟ್ಸಪ್‌ಲಿ ಒಂದಷ್ಟು ಸ್ಟೇಟಸ್‍ಗಳು, ಮತ್ತೆ ಅದನ್ನ ಯಾರೆಲ್ಲಾ ನೋಡಿದಾರೆ ಅನ್ನೋ ಮರ್ಲ್. ಇಷ್ಟು ಸಾಲದಕ್ಕೆ ಗೂಗಲ್ ಪ್ಲೇ ಸ್ಟೋರ್‍! ಸಹಸ್ರಾರು ಏಪ್‍ಗಳು. ಒಂದು ಫೋಟೋ ಚಂದ ಮಾಡುವ ಮೇಕಪ್ ಮಾಡುವ ಆಪ್, ಹೀಗೆ ಸಾಕೋ… ಸಾಕು. ನಾನು ಹೊಸತೇನನ್ನೂ ಹೇಳ್ಲಿಲ್ಲ ಇಲ್ಲಿ. ನಿಮಿಗೆಲ್ಲಾ ಗೊತ್ತಿರೋದೇ. ಇನ್ನೂ ಹೇಳಿದ್ರೆ ಹುಡಿಕೊಂಡು ಬಂದು ಹೊಡಿತೀರಿ, ಯಾಕಂದ್ರೆ ಮತ್ತೆ ಮೊಬೈಲ್‍ನಲ್ಲಿ ಇದನ್ನು ಓದುತ್ತಾ ಸಮಯ ಕಳಿತಾ ಇದೀರಿ. ನನಗಂತು ಬಹುಷಃ ಇದರಿಂದ ಹೊರಬರ್ಲಿಕೆ ತುಂಬಾ ಕಷ್ಟ ಅಂತನ್ನಿಸ್ತದೆ. ನಾನ್ಯಾವಗೆಲ್ಲಾ ಹೊರ ಬರ್ಲಿಕೆ ಪ್ರಯತ್ನಿಸ್ತೇನೋ ಆವಾಗೆಲ್ಲಾ ಮೊಬೈಲ್ ನನಗೆ ಏನೆಲ್ಲಾ ಸಹಾಯ ಮಾಡಿದೆ ಅನ್ನೋದನ್ನ ನೆನಪಿಸ್ತದೆ.

ಹೆಚ್ಚಲ್ಲ, ಒಂದು ಐದಾರು ವರ್ಷಗಳಷ್ಟು ಹಿಂದೆ. ನನ್ನಲ್ಲಿ ಸ್ಮಾರ್ಟ್ ಫೊನ್ ಇರ್ಲಿಲ್ಲ. ನನಗೆ ನನ್ನ ಅತ್ಯಂತ ಸನಿಹದ ವಿಷಯಗಳ ನನ್ನ ಸರಹದ್ದಿಗೊಳಪಟ್ಟ ವಿಷಯಗಳ ಹೊರತಾಗಿ ಬೇರೇನೂ ಗೊತ್ತಿರ್ಲಿಲ್ಲ. ಹೇಳ್ಲಿಕೆ ಯಾರೂ ಇರ್ಲೂ ಇಲ್ಲ. ಹೌದು ಇದರಿಂದಾಗಿ ನಾನು ಬಹಳಷ್ಟು ವಿಷಯಗಳಿಂದ ವಂಚಿತಳಾಗಿದ್ದೇನೆ. ಖೇದ ಇದೆ ನನಗೆ. ಆವತ್ತು ಅಲ್ಲೆಲ್ಲೋ ಪ್ರತಿಭಾ ಕಾರಂಜಿಯಲ್ಲಿ ನನಗೆ ಪರಿಚಿತಳಾದ ಗೆಳತಿ, ಅಲ್ಲೆಲ್ಲೋ ಓಪನ್ ಚೆಸ್ ಟೂರ್ನಿಮೆಂಟ್ ನಡೆದಾಗ ಜೊತೆಗಾಡಿದ ಒಂದಷ್ಟು ಟ್ರಿಕ್ಸ್‌ಗಳನ್ನು ಹೇಳಿಕೊಟ್ಟ ಅಣ್ಣನೊಬ್ಬ, ಅದೆಲ್ಲೋ ಟೂರ್ ಹೋದಾಗ ರೂಮ್‍ನಲ್ಲೇ ಬಾಕಿಯಾದ ಬ್ಯಾಗ್‍ನ್ನು ತಂದುಕೊಟ್ಟ ಅಂಕಲ್ ಒಬ್ಬರು, ಹೀಗೆ ಸಹಾಯ ಮಾಡಿದ, ಸ್ನೇಹ ತೋರಿದ ಯಾವುದೋ ಊರಿನ ಯಾವುದೋ ಜನರ ಹೆಸರು ನೆನಪಿಲ್ಲ, ಊರು ನೆನಪಿಲ್ಲ, ಮುಖ ನೆನಪಿಲ್ಲ, ಕಣ್ಣೆದುರು ಬಂದರೆ ಗುರುತಿಸಲು ಸಾಧ್ಯವೂ ಇಲ್ಲ. ಇವತ್ತಾಗಿದಿದ್ರೆ ಅವ್ರು ಸಾಮಜಿಕ ಜಾಲತಾಣಗಳಲ್ಲಾದ್ರೂ ಸಿಕ್ತಿದ್ರು, ಆದರೆ ಸಂಪರ್ಕ ಇಲ್ಲವಾದರೂ ಆ ವ್ಯಕ್ತಿಗಳ ಜೊತೆಗಿನ ಒಡನಾಟ ಮಾತ್ರ ತುಂಬಾ ಖುಷಿ ಕೊಡ್ತದೆ. ಇದೊಂದು ದೊಡ್ಡ ದುಃಖ ಪಡುವ ವಿಷಯ ಆಗಿಲ್ಲದೇ ಇರಬಹುದು. ಆದರೆ ಆವತ್ತು ನನಗೆ ಪ್ರಪಂಚ ದೊಡ್ಡದಾಗಿ ಕಾಣುತ್ತಿತ್ತು ಹಾಗೂ ಬೆಂಗಳೂರು ದೂರದ ಊರಾಗಿತ್ತು. ಅದೆಷ್ಟೋ ಅವಕಾಶಗಳು ಅಜ್ಞಾನದಿಂದಾಗಿಯೇ ಕೈಜಾರಿ ಹೋಗಿದೆ.

ಆದರೆ ಮೊಬೈಲ್ ಇರ್ತಿದ್ರೆ ಏನನ್ನೋ ಸಾದಿಸ್ತಿದ್ದೆ ಆನ್ನೋ ಭ್ರಾಂತಿ ನನಗಿಲ್ಲ. ಅದಿದ್ದಿದ್ದಿದ್ರೆ ನಾನು ಇವತ್ತಿನಷ್ಟು ಕೂಡಾ ಚೈತನ್ಯಪೂರ್ಣಳಾಗಿರ್ತಿರ್ಲಿಲ್ಲ. ಇನ್ನೊಂದು ಹತ್ತು ಕೆಜಿ ಜಾಸ್ತಿ ತೂಗ್ತಿದ್ನೇನೋ ಗೊತ್ತಿಲ್ಲ. ಸಂಬಂಧಗಳನ್ನು ಗಟ್ಟಿ ಮಾಡುವುದು ಮೊಬೈಲ್ ಯಾಕಂದ್ರೆ ಗ್ರೂಪ್‍ಗಳಿಂದಾಗಿ ನನ್ನ ನನ್ನ ಅಮ್ಮನ ಚಿಕ್ಕಮ್ಮನ ಮಗ, ನನ್ನ ಆಜ್ಜನ ಅಣ್ಣನ ಮಗಳು ಅಥವಾ ಇನ್ನಿತರ ಸಂಬಂಧಿಕರು ಜೊತೆಯಲ್ಲೆ ಮಾತನಾಡಬಹುದು, ಪರಿಚಯ ಆಗ್ತದೆ, ಸಂಬಂಧಗಳು ಉಳಿತವೆ. ಹೊಸ ಹೊಸ ಫ್ರೆಂಡ್ಸ್ ಸಿಕ್ತಾರೆ, ಯಾರನ್ನೂ ಕಳಕೊಳ್ಳಬೇಕಾದ ಪ್ರಮೇಯ ಇಲ್ಲ ಅನ್ನುವುದು ಶುದ್ದ ತಪ್ಪು ಕಲ್ಪನೆ. ಕೇವಲ ಚಾಟಿಂಗ್‍ನಿಂದಾಗಿ ಸಂಬಂಧಳು ಎಷ್ಟು ಗಟ್ಟಿಯಾಗಬಲ್ಲುದು? ಅಥವಾ ಹೊಸ ಹೊಸ ಜನರೊಂದಿಗೆ ಎಷ್ಟು ದಿನ ನಾನು ಸಂಪರ್ಕ ಉಳಿಸಿಕೊಳ್ಳಬಲ್ಲೆ? ಸ್ಮಾರ್ಟ್ ಫೋನ್ ಬಹಳ ದೊಡ್ಡ ವಿಷಯ. ಅದರ ಬೆಳವಣಿಗೆ ದಿನದಿಂದ ದಿನಕ್ಕೆ ಉಬ್ಬುತ್ತಲೇ ಹೋಗುತ್ತದೆ, ಹಿರಿದಾಗುತ್ತದೆ. ಬಹುಷಃ ಗೊತ್ತಿರುವುದನ್ನು ತಿರು ತಿರುಗಿಸಿ ಬರೆಯುತ್ತಾ ಒಂದ್ ಹತ್ತ್ ನಿಮಿಷಕ್ಕೆ ನಿಮ್ಮ ಮೊಬೈಲ್‍ಗಳಲ್ಲಿ ನನ್ನ ಅಕ್ಷರಗಳನ್ನು ಕೂರಿಸಿರುತ್ತೇನೆ, ಅದಕ್ಕಾಗಿ ವಿಷಾದ ವ್ಯಕ್ತ ಪಡಿಸುತ್ತಾ…… ತಿಳಿದಿರದ ವಿಷಯಗಳನ್ನು ತಿಳಿಸುವ, ನನ್ನವರೆಲ್ಲರನ್ನೂ ನಾನಿರುವಲ್ಲಿಗೇ ಕರೆಸುವ ಮೊಬೈಲ್‍ಗೆ ಧನ್ಯವಾದ ತಿಳಿಸುತ್ತಾ……. ತಲೆ ಮೇಲೆ ಫ಼ಟಾರ್ ಅಂತ ಹೊಡೆದು ಕೂರಿಸಿದ ಆತ್ಮವನ್ನು ಹುಡುಕುತ್ತಾ…..

ಈ ನಾನು ನಾನಾಗಿರಬಹುದು, ಈ ನಾನು ನೀನಾಗಿರಬಹುದು, ಈ ನಾನು ಅವನಾಗಿರಬಹುದು, ಈ ನಾನು ಅವಳಾಗಿರಬಹುದು…. ಮೂಲೆಗೊಂದಿದ ಆತ್ಮ ಮತ್ತೆ ಚೇತರಿಸಿಕೊಳ್ಳಲಿ, ಎಲ್ಲಾ ಆಗುಹೋಗುಗಳನ್ನು ನಿಯಂತ್ರಿಸಲಿ, ಸರಿದಾರಿಗೆ ಮುನ್ನಡೆಸಿ ಯಶಸ್ಸು ಸಿಗುವಂತಾಗಲಿ…

– ಪ್ರಗಲ್ಭಾ