ರೈಲ್ವೇ ಸ್ಟೇಷನ್ ಬಳಿ ಭಿಕ್ಷೆ ಬೇಡುತ್ತಿದ್ದ ಶಿಕ್ಷಕಿಯನ್ನು ಫೇಸ್ ಬುಕ್ ಮುಖಾಂತರ ಗುರುತಿಸಿದ ಶಿಷ್ಯ….

ಕೇರಳದ ವಿದ್ಯಾ ಎಂ.ಆರ್, ಎಂಬ ಸರಕಾರಿ ನೌಕರಳೊಬ್ಬಳು ತಂಪನೂರು ರೈಲ್ವೇ ಸ್ಟೇಷನ್ ಬಳಿ ತನ್ನ ಗೆಳೆತಿಗಾಗಿ ಕಾಯುತ್ತಿದ್ದಳು. ಆ ಸಂದರ್ಭದಲ್ಲಿ ಅಲ್ಲೇ ಹತ್ತಿರದಲ್ಲಿ ವೃದ್ದೆಯೊಬ್ಬಳು ಕಾಣಿಸುತ್ತಾಳೆ. ಕೈಯಲ್ಲೊಂದು ಪ್ಲಾಸ್ಟಿಕ್ ಚೀಲ, ಅದೆಷ್ಟೋ ದಿನಗಳಿಂದ ತೊಳೆಯದ ಹಳೇ ಕೊಳೆಯಾದ ಬಟ್ಟೆಯನ್ನು ಧರಿಸಿದ್ದ ಆಕೆ ಮರವೊಂದರಿಂದ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದಳು.

ಆಕೆಯನ್ನು ಹಿಂಬಾಲಿಸಿದ ವಿದ್ಯಾ ವೃದ್ದೆಯನ್ನು ಮಾತನಾಡಿಸುತ್ತಾ ”ಹಸಿವೆಯಾಗುತ್ತಿದೆಯೇ?” ಎಂದು ವಿಚಾರಿಸಿ ವೃದ್ದೆ ಬೇಡವೆಂದರೂ ಆಕೆಗೆ ಇಡ್ಲಿ, ವಡೆ ಕೊಡಿಸುತ್ತಾಳೆ. ವೃದ್ದೆಯನ್ನು ಮಾತನಾಡಿಸುತ್ತಾ ವಿದ್ಯಾಳಿಗೆ ಆಕೆ ವಿದ್ಯಾವಂತೆ ಎಂಬುದು ಸ್ಪಷ್ಟವಾಗುತ್ತದೆ ಹಾಗೂ ಮಲಪ್ಪುರಂ ಶಾಲೆಯ ನಿವೃತ್ತ ಶಿಕ್ಷಕಿ ಎಂಬುದು ತಿಳಿಯುತ್ತದೆ. ಈ ವಿಷಯವನ್ನು ಆಕೆ ತನ್ನ ಫೇಸ್ ಬುಕ್ ಪೇಜ್‍ನಲ್ಲಿ ಹಂಚಿಕೊಳ್ಳುತ್ತಾಳೆ. ಈ ಪೋಸ್ಟ್‌ನ್ನು ಗಮನಿಸಿದ ವ್ಯಕ್ತಿಯೊಬ್ಬರು ”ಈಕೆ ನಮ್ಮ ವಲ್ಸಾ ಟೀಚರ್, ನಮಗೆ ಗಣಿತ ಹೇಳಿಕೊಡುತ್ತಿದ್ದರು” ಎಂದು ಸಹಾಯಕ್ಕೆ ಮುಂದಾಗುತ್ತಾರೆ. ಆದರೆ ಸ್ವಾಭಿಮಾನಿ ವಲ್ಸಾ ಟೀಚರ್ ಸಹಾಯವನ್ನು ನಿರಾಕರಿಸಿ ತಾನು ತನ್ನ ಗಂಡ ಹಾಗೂ ಮಗನೊಂದಿಗೆ ಇರಬೇಕು ಎಂದು ತಿಳಿಸುತ್ತಾಳೆ.

ಇದೀಗ ಪೋಲಿಸರು ವಲ್ಸಾ ಮೇಡಂ ನ ಸಹೋದರಿಯನ್ನು ಹುಡುಕಿದ್ದು ಆಕೆಯ ಗಂಡ ಹಾಗೂ ಮಗನನ್ನು ಹುಡುಕುತ್ತಿದ್ದಾರೆ. ವಿದ್ಯಾರ್ಥಿಗಳು ವಲ್ಸಾ ಮೇಡಂನೆಡೆಗೆ ತೋರಿಸಿದ ಪ್ರೀತಿ ಮೆಚ್ಚುವಂತಹದ್ದು, ಆದರೆ ತನ್ನ ಸಂಸಾರದಿಂದಲೇ ಆಕೆ ಪರಿತ್ಯಕ್ತಳಾದದ್ದು ನಿಜಕ್ಕೂ ಖೇದಕರ.

 

Source: Daily Bhaskar